ನಮ್ಮ ಕನ್ನಡ ಭಾಷೆಯ ಉನ್ನತಿಗಾಗಿ - ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ

Dr Ashwathnarayan C. N.
2 min readNov 1, 2020

ಕನ್ನಡ ರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ನನ್ನ ಕೆಲವು ಆಲೋಚನೆಗಳನ್ನು ನಿಮ್ಮ ಜೊತೆ ಹಂಚಿಕೊಂಡೆ. ಇದರ ಕುರಿತು ನಿಮ್ಮ ವಿಶಿಷ್ಟ ಪ್ರತಿಕ್ರಿಯೆಗಳಿಂದ ನನಗೆ ಸಂತಸ ತಂದಿದೆ.

ನಮ್ಮ ಕನ್ನಡ ಭಾಷೆಯ ಸಂಸ್ಕೃತಿ-ಪರಂಪರೆಯ ವೈಭವವನ್ನು ಸಂರಕ್ಷಿಸಲು ಹಾಗೂ ಪೋಷಿಸಲು ನಾವೆಲ್ಲರೂ ಬಹಳಷ್ಟು ಕೆಲಸ ಮಾಡಬೇಕಿದೆ.

ಈ ನೆಲ ನನಗೆ ಹೆಸರು, ಹಿರಿಮೆ ಹಾಗೂ ಹೊಣೆಗಾರಿಕೆಯನ್ನು ನೀಡಿದೆ. ಅದಕ್ಕಾಗಿ ನಮ್ಮ ಕನ್ನಡ ಭಾಷೆಯ ಉನ್ನತಿಗಾಗಿ ಇಡುತ್ತಿರುವ ಒಂದು ದಿಟ್ಟ ಹೆಜ್ಜೆ - ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ.

ಡಿಜಿಟಲ್ ತಾಂತ್ರಿಕತೆಯಲ್ಲಿ ಕನ್ನಡ ಬಳಕೆ ಸಶಕ್ತಗೊಳಿಸುವ ಸಲುವಾಗಿ “ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ” ರಚನೆ ಪ್ರಕ್ರಿಯೆಗೆ 65ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಚಾಲನೆ ನೀಡಿದ್ದೇವೆ. ರಾಜ್ಯದ ನವೋದ್ಯಮಗಳ ದೂರದರ್ಶಿ ತಂಡ”ದ (ವಿಷನ್ ಗ್ರೂಪ್) ಅಧ್ಯಕ್ಷರಾದ ಪ್ರಶಾಂತ್ ಪ್ರಕಾಶ್ ಅವರ ನೇತೃತ್ವದಲ್ಲಿ ತಂಡ ಅಸ್ತಿತ್ವಕ್ಕೆ ಬರಲಿದೆ.

ರಾಜ್ಯದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನವೋದ್ಯಮಗಳ ಸೃಜನೆಗೆ ನಿಯೋಜಿತವಾಗಿರುವ “ದೂರದರ್ಶಿ ತಂಡ” (ವಿಷನ್ ಗ್ರೂಪ್)ದ ಕೆಳಗೆ ಈ ತಂಡ ಕೆಲಸ ಮಾಡಲಿದೆ.

“ಕನ್ನಡಿಗರಿಗೆ ಕನ್ನಡದಲ್ಲಿಯೇ ಜ್ಞಾನ ಸಿಗುವಂತೆ ಮಾಡುವುದಕ್ಕಾಗಿ ಈ ತಂಡದ ಸ್ಥಾಪನೆಯನ್ನು ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಹಮ್ಮಿಕೊಂಡಿರುವುದು ಸಂತೋಷದ ಸಂಗತಿ. ‘ಕನ್ನಡವು ಕನ್ನಡವ ಕನ್ನಡಿಸುತಿರಲಿ’ ಎನ್ನುವ ವರಕವಿ ಬೇಂದ್ರೆ ಅವರ ಮಾತಿಗೆ ಅನುಗುಣವಾಗಿ ಅದನ್ನು ಸಾಕಾರಗೊಳಿಸಲು ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ತಂಡವು ಶಕ್ತಿಮೀರಿ ಶ್ರಮಿಸುವುದು ಎಂದು ನನ್ನ ಬಲವಾದ ನಂಬಿಕೆ.

ಈ ತಂಡ ರಚನೆಯ ಧ್ಯೇಯೋದ್ದೇಶಗಳು ಈ ಕೆಳಕಂಡಂತಿವೆ:
• ಸಂವಹನದ ಎಲ್ಲಾ ವಿಧಾನಗಳು ಸೇರಿದಂತೆ ಡಿಜಿಟಲ್ ತಾಂತ್ರಿಕತೆಯ ಬಹುಸ್ತರಗಳಲ್ಲಿ ಕನ್ನಡ ಬಳಕೆಗೆ ಉತ್ತೇಜನ
• ಕನ್ನಡ ಅಕ್ಷರಗಳು, ಟೈಪ್ ಫೇಸ್ ಗಳು, ಟೈಪಿಂಗ್ ಇಂಟರ್ ಫೇಸ್ ಗಳು, ಸಾಫ್ಟ್ ವೇರ್ ಗಳು, ವ್ಯಾಕರಣ ತಿದ್ದುಪಡಿ ತಂತ್ರಾಂಶಗಳು ಇತ್ಯಾದಿ ಅಭಿವೃದ್ಧಿ
• ಕನ್ನಡ ಭಾಷೆಯಲ್ಲಿನ ಜ್ಞಾನ ಮತ್ತು ಮಾಹಿತಿ ಹಾಗೂ ಅದರ ಬಳಕೆ/ಸ್ವೀಕೃತಿ ನಡುವೆ ಇರುವ ಕಂದಕ ತುಂಬಲು ಸಂಪರ್ಕ ಸೇತುವಾಗುವುದು.
• ದಸ್ತಾವೇಜು ಮತ್ತು ನೀತಿ ರಚನಾ ಕೋಶಗಳ ರಚನೆ
• ಮುಕ್ತ ಮೂಲ ಸಾಫ್ಟ್ ವೇರ್ಗಳ ಅಭಿವೃದ್ದಿ
• ಸದೃಢ ಡಿಜಿಟಲ್ ವೇದಿಕೆ ರೂಪಿಸಿ ಕನ್ನಡ ಭಾಷೆಯ ಸಂಪನ್ಮೂಲಗಳ ಸಂಗ್ರಹ, ಮಾರ್ಗದರ್ಶನ, ಬೆಂಬಲ, ಜಾಲ ನಿರ್ಮಾಣ ಹಾಗೂ ಪ್ರವೇಶಾವಕಾಶಗಳಿಗೆ ಅನುವು ಮಾಡಿಕೊಡುವುದು.
• ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ, ಕೃತಿಸ್ವಾಮ್ಯ ಅವಧಿ ತೀರುವಳಿಗೊಂಡ ಕೃತಿಗಳ, ಮತ್ತು ವಿಷಯಗಳ ಡಿಜಿಟಲ್ ಸ್ವರೂಪದ ದಾಖಲೀಕರಣ ಹಾಗೂ ಸ್ಮೃತಿ ಕೋಶ (ಆರ್ಕೈವಲ್) ಸ್ಥಾಪನೆಗೆ ಪ್ರೋತ್ಸಾಹ
• ಕನ್ನಡ ಹಾಗೂ ಇಂಗ್ಲಿಷ್ ಭಾಷೆ ನಡುವೆ, ಅದೇ ರೀತಿಯಲ್ಲಿ ಕನ್ನಡ ಹಾಗೂ ಭಾರತದ ಇತರ ಭಾಷೆಗಳ ನಡುವೆ ಯಂತ್ರ ಕಲಿಕೆ (ಮಷೀನ್ ಲರ್ನಿಂಗ್)- ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ಭಾಷಾಂತರ, ರೂಪಾಂತರ, ಟ್ರಾನ್ಸ್ ಸ್ಕ್ರಿಪ್ಷನ್ (ಮಾತನ್ನು ಪಠ್ಯವಾಗಿ ಪರಿವರ್ತಿಸುವುದು) ಮತ್ತಿತರ ಚಟುವಟಿಕೆಗಳಿಗೆ ಒತ್ತು ನೀಡವುದು.
• ಶಬ್ದಕೋಶಗಳು, ಥೆಸಾರಿ ಮತ್ತಿತರ ಸೂಕ್ತ ಭಾಷಾ ಸಾಧನಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ ಸಂಬಂಧಿಸಿದ ಕಾರ್ಯಗಳನ್ನು ಸಂಯೋಜಿಸುವುದು.
• ಕನ್ನಡ ಭಾಷೆಯ ಮೂಲಕ ಹೆಚ್ಚಿನ ಮಟ್ಟದಲ್ಲಿ ಡಿಟಿಟಲ್ ಮಾಹಿತಿ ಪ್ರಸರಣಕ್ಕೆ ಅನುವು ಮಾಡಿಕೊಡುವುದು
• ವಿವಿಧ ವಿಶ್ವವಿದ್ಯಾಲಯಗಳು ಮತ್ತು ಪ್ರಕಾಶಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ಪುಸ್ತಕಗಳ ಪ್ರಕಾಶನದ ಜೊತೆಜೊತೆಗೇ ಡಿಜಿಟಲೀಕರಣ ಸೇವೆಗಳನ್ನು ಮಾರುಕಟ್ಟೆಯ ದರದಲ್ಲಿ ಒದಗಿಸುವುದು..
• ಸಾಂವಿಧಾನಿಕ ಹುದ್ದೆಗಳಿಗೆ ಭಾಷಾಂತರ ಸೇವೆ ಲಭ್ಯವಾಗಿಸುವುದು.
• ಕೇಂದ್ರ ಸರ್ಕಾರದ ಸಾಂವಿಧಾನಿಕ ಹುದ್ದೆಗಳ ವಿಧೇಯಕಗಳನ್ನು ಮತ್ತು ಟ್ವೀಟ್’ಗಳನ್ನು ಕನ್ನಡಕ್ಕೆ ಅನುವಾದಿಸುವುದು

“ತಾಂತ್ರಿಕ ನಾಯಕತ್ವಕ್ಕೆ ಪೂರಕ” ಕರ್ನಾಟಕವು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಆಧಾರ್, ಯುಪಿಐ, ಜಿಎಸ್ ಟಿ-ಸಹಾಯ್ ಸೇರಿದಂತೆ ಹಲವಾರು ಸಾರ್ವಜನಿಕ ಬಳಕೆಯ ತಾಂತ್ರಿಕ ಉತ್ಪನ್ನಗಳ ಅಭಿವೃದ್ಧಿಯಲ್ಲಿ “ನಮ್ಮ ಬೆಂಗಳೂರು” ಪ್ರಮುಖ ಪಾತ್ರ ವಹಿಸಿರುವುದು ಇದಕ್ಕೊಂದು ನಿದರ್ಶನವಾಗಿದೆ. ರಾಜ್ಯದ ಈ ತಾಂತ್ರಿಕ ನಾಯಕತ್ವವನ್ನು ಮುಂದುವರಿಸಿಕೊಂಡು ಹೋಗಲು “ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ”ದ ರಚನೆ ಸಹಕಾರಿಯಾಗಲಿದೆ.

--

--

Dr Ashwathnarayan C. N.

ಜನಸೇವಕ. Deputy Chief Minister of Karnataka. Minister for Higher Education, Electronics, IT & BT, Science & Technology, Skill Development.