ಬೆಂಗಳೂರು ಪಶ್ಚಿಮ ವಲಯದಲ್ಲಿ ಕೋವಿಡ್ 19 ಪರಿಸ್ಥಿತಿಯ ನಿರ್ವಹಣೆ

Dr Ashwathnarayan C. N.
3 min readJul 11, 2020

ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿ ಕೋವಿಡ್ 19 ನಿರ್ವಹಣೆಗಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಬೆಂಗಳೂರಿನಲ್ಲಿ ಪ್ರಸ್ತುತ ಸಿದ್ಧಪಡಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸರ್ಕಾರದ ಸತತ ಪ್ರಯತ್ನ ಜಾರಿಯಿದ್ದು, ಇನ್ನೂ ಹೆಚ್ಚಿನ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ. ನಗರದಲ್ಲಿ ಈ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಾನ್ಯ ಮುಖ್ಯಮಂತ್ರಿಯವರು ನನಗೆ ವಹಿಸಿದ್ದಾರೆ. ಈ ಜವಾಬ್ದಾರಿಯುತ ಸ್ಥಾನದ ಸಮರ್ಪಕ ನಿರ್ವಹಣೆಗಾಗಿ ಸಂಬಂಧಪಟ್ಟ ಎಲ್ಲಾ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘಟನೆಗಳ ಸಮನ್ವಯದ ಮೂಲಕ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಈ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸಿದ್ಧಪಡಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರವು ದೇಶದಲ್ಲಿಯೇ ಅತ್ಯಂತ ದೊಡ್ಡ ಕೋವಿಡ್ ಆರೈಕೆ ಕೇಂದ್ರವಾಗಿದ್ದು, ಇಲ್ಲಿ ಉತ್ಕೃಷ್ಟ ಮಟ್ಟದ ಸೌಲಭ್ಯಗಳೊಂದಿಗೆ 10,100 ಹಾಸಿಗೆಗಳುಳ್ಳ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದನ್ನು 30,000 ಹಾಸಿಗೆಗಳುಳ್ಳ ಕೇಂದ್ರವನ್ನಾಗಿ ಮಾಡುವ ಉದ್ದೇಶವೂ ನಮಗಿದೆ. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ICU ಸೌಲಭ್ಯ ನೀಡುತ್ತಿರುವ ಆರೈಕೆ ಕೇಂದ್ರವಿದು. ಈ ಆರೈಕೆ ಕೇಂದ್ರದಲ್ಲಿ 100 ICU ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು.

ಈ ಜವಾಬ್ದಾರಿಯ ಜತೆಗೆ ನನಗೆ ಬೆಂಗಳೂರು ಪಶ್ಚಿಮ ವಲಯದ ಕೋವಿಡ್ 19 ರ ಸಮಗ್ರ ನಿರ್ವಹಣೆಯನ್ನೂ ಸಹ ನೀಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸುತ್ತಿನ ಸಭೆ ಕರೆಯಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಬಿಬಿಎಂಪಿ ಸದಸ್ಯರು ಹಾಗೂ ಪಶ್ಚಿಮ ವಲಯದ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಿದ್ದೇನೆ.

ಬೆಂಗಳೂರು ಪಶ್ಚಿಮ ವಲಯದ ಸಂಪೂರ್ಣ ಕೋವಿಡ್ 19 ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಇಂದು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಪಶ್ಚಿಮ ವಲಯದಲ್ಲಿ ಕೋವಿಡ್ 19ರ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡುವ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ದಿನದ 24 ಗಂಟೆ ಕೆಲಸ ಮಾಡುವ ಕಾಲ್ ಸೆಂಟರ್ ಒಂದನ್ನು ತೆರೆಯಲಾಗುವುದು. ಇದರಿಂದ ಈ ವಿಭಾಗದ ಎಲ್ಲ ಮಾಹಿತಿ ಅಂಗೈನಲ್ಲೇ ದೊರಕಲಿದೆ. ಸೋಂಕಿತರ ಪರೀಕ್ಷೆ, ಅವರನ್ನು ಆಸ್ಪತ್ರೆಗೆ ಸಾಗಿಸುವುದು, ಕ್ವಾರಂಟೈನ್, ಮನೆಯಲ್ಲಿನ ಆರೈಕೆ ಸೇರಿ ಎಲ್ಲ ಸಂಗತಿಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯವಾಗುವುದು.

ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಿ ಆದಷ್ಟು ಬೇಗ ಫಲಿತಾಂಶ ಸಿಗುವಂತೆ ನೋಡಿಕೊಳ್ಳಲಾಗುವುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ TrueNAT ಯಂತ್ರಗಳನ್ನು ಅಳವಡಿಸಿ, ಗಂಟಲು ದ್ರವ ಮಾದರಿ ಪಡೆದ ಅರ್ಧ ಗಂಟೆಯೊಳಗೆ ವರದಿ ಸಿಗುವಂತೆ ಮಾಡಲಾಗುವುದು.

ಇದರೊಂದಿಗೆ, ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸುಗಳು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರಕಾರೀ ಸಿಬ್ಬಂದಿಗಳ ಕೊರತೆ ಇದ್ದ ಕಡೆ ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸುಗಳು ಮತ್ತಿತರೆ ಸಿಬ್ಬಂದಿಗಳನ್ನು ಎರವಲು ಪಡೆಯಲಾಗುತ್ತಿದೆ. ಈಗಾಗಲೇ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ನೆರವು ಕೋರಲಾಗಿದೆ.

ಮೃತದೇಹಗಳ ವೈಜ್ಞಾನಿಕ ಮತ್ತು ಸುರಕ್ಷಿತ ವಿಲೇವಾರಿಗೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಮೃತರ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಆಂಬುಲೆನ್ಸ್ ಗಳ ಸಮರ್ಪಕ ಬಳಕೆ ಮಾಡಲಾಗುವುದು. ತುರ್ತು ಚಿಕಿತ್ಸೆಯ ಅಗತ್ಯಕ್ಕಾಗಿ ಆಂಬುಲೆನ್ಸ್ ಗಳ ಬಳಕೆ ಮಾಡಲಾಗುವುದು ಮತ್ತು ಸುರಕ್ಷಿತವಾಗಿ ಮೃತದೇಹಗಳ ರವಾನೆ ಮಾಡಲು ಇತರ ವಾಹನಗಳನ್ನು ಬಳಸಲಾಗುವುದು.

ಟೆಸ್ಟಿಂಗ್ ಸಾಮರ್ಥ್ಯ ಹೆಚ್ಚಿಸಲು ಲ್ಯಾಬ್ ಗಳಲ್ಲಿ 24*7 ಕಾರ್ಯನಿರ್ವಹಣೆಗೆ ಅಗತ್ಯ ಸಿಬ್ಬಂದಿಗಳ ವ್ಯವಸ್ಥೆ ಜಾರಿಯಲ್ಲಿದೆ. ಹಾಟ್ ಸ್ಪಾಟ್ ಗಳಲ್ಲಿ ಶೀಘ್ರ ಪರೀಕ್ಷೆ ನಡೆಯಲಿದೆ. ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗುವಂತೆ ಅವರ ಹೆರಿಗೆ ದಿನಾಂಕದ ಮೊದಲೇ ಪರೀಕ್ಷೆ ನಡೆಸಿ ಕೋವಿಡ್ 19 ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಜಾರಿಯಾಗಲಿದೆ.

ಉಸಿರಾಟದ ಸಮಸ್ಯೆ ಇರುವ ಯಾವುದೇ ರೋಗಿಗೆ ಕ್ಷಿಪ್ರ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಕಾರಾತ್ಮಕವಾಗಿ ಸ್ಪಂದಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕಾರ್ಯನಿರತ ಎಲ್ಲಾ ಸಿಬ್ಬಂದಿಗೆ, ಆಶಾ ಮತ್ತುಅಂಗನವಾಡಿ ಕಾರ್ಯಕರ್ತೆಯರಿಗೆಹಾಗೂ ವೈದ್ಯರಿಗೆ ಸುರಕ್ಷಿತ ಉಪಕರಣಗಳು, PPE ಕಿಟ್ ಗಳನ್ನು ಪೂರೈಸಲಾಗುವುದು. ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆಗಾಗಿ ಇಸ್ಕಾನ್ ಹಾಗೂ ಇತರ ಸಂಸ್ಥೆಗಳೊಂದಿಗೆ ಜಂಟಿಯಾಗಿ ಸಮರ್ಪಕ ವ್ಯವಸ್ಥೆ ಜಾರಿಗೊಳಿಸಿದ್ದೇವೆ.

ಕೋವಿಡ್ ಹಿನ್ನಲೆಯಲ್ಲಿ ಎಲ್ಲೂ ಹಣಕಾಸು ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಅಕಸ್ಮಾತ್ ಕೊರತೆ ಉಂಟಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಾದ ಹಣವನ್ನು ಬಳಸುವಂತೆ ಪಾಲಿಕೆಯ ಎಲ್ಲ ಸದಸ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದೆ.

ಕೋವಿಡ್ 19 ಹೊರತಾದ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕೆಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಪ್ರತಿ ಉಪ ವಿಭಾಗದಲ್ಲಿಯೂ ಬಿಬಿಎಂಪಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜತೆಗೆ ಬಿ.ಬಿ.ಎಂ.ಪಿ ಯ ಎಲ್ಲ ವಾರ್ಡುಗಳಲ್ಲಿ ಫೀವರ್ ಕ್ಲಿನಿಕ್‌ ಗಳಿಗೆ ಪರ್ಯಾಯವಾಗಿ ತುರ್ತು ಕ್ಲಿನಿಕ್‌ ಗಳನ್ನೂ ಸಹತೆರೆಯಲಾಗುತ್ತಿದೆ.

ಕೋವಿಡ್ ಹಾಗೂ ಕೋವಿಡ್ ಹೊರತಾದ ರೋಗಿಗಳಿಗೆ ಸಮಾನ ಮಹತ್ವ ಕೊಟ್ಟು ಚಿಕಿತ್ಸೆ ನೀಡಬೇಕು. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಕೆಲ ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಕೋವಿಡ್ 19 ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಕಂಡು ಬಂದಿದೆ. ಅಂತಹ ಆಸ್ಪತ್ರೆಗಳು ಕಾನೂನು ಕ್ರಮ ಎದುರಿಸುವುದು ಖಚಿತ. ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇಕಡಾ 50 ರಷ್ಟನ್ನು ಕೋವಿಡ್ 19 ಸೋಂಕಿತರಿಗಾಗಿ ಸರಕಾರದ ಸುಪರ್ದಿಗೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಕೋವಿಡ್ 19 ಅನಿರೀಕ್ಷಿತವಾಗಿ ರಾಜ್ಯದ ಮೇಲರಗಿದ ಸಾಂಕ್ರಾಮಿಕ ಪೀಡೆ. ಇದನ್ನು ಸಮರೋಪಾದಿಯಲ್ಲಿ ಎದುರಿಸಲು ಪ್ರತಿಯೊಬ್ಬರೂ ಸರಕಾರದ ಜತೆ ಕೈಜೋಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಜನರ ಜೀವಕ್ಕಿಂತ ಯಾವುದೂ ಹೆಚ್ಚಲ್ಲ ಎಂಬ ಸಂಗತಿಯನ್ನು ಮರೆಯಬಾರದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು.

ಕೋವಿಡ್ 19 ವಿರುದ್ಧ ನಮ್ಮ ನಿಮ್ಮೆಲ್ಲರ ಸಂಘಟಿತ ಹೋರಾಟ ಜಾರಿಯಲ್ಲಿರಲಿ. ನೈರ್ಮಲ್ಯದ ಕ್ರಮಗಳನ್ನು ಅನುಸರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ. ಸಮಾಜದ ಸುರಕ್ಷತೆ ನಮ್ಮ ಕೈಯಲ್ಲಿದೆ. ಎಲ್ಲಾ ರೀತಿಯ ಪರಿಸ್ಥಿತಿಯ ನಿರ್ವಹಣೆಗೆ ಸರ್ಕಾರ ಸಿದ್ಧವಾಗಿದೆ. ನಮ್ಮೊಂದಿಗೆ ನಿಮ್ಮ ಸಹಕಾರ ಎಂದಿನಂತೆ ಸದಾ ಇರಲಿ.

--

--

Dr Ashwathnarayan C. N.

ಜನಸೇವಕ. Deputy Chief Minister of Karnataka. Minister for Higher Education, Electronics, IT & BT, Science & Technology, Skill Development.